ಮೇಷ ರಾಶಿಗೆ ಐದು ಅಶುಭ ವಿಚಾರಗಳು
- ಈ ತಿಂಗಳ ಹದಿನಾಲ್ಕನೇ ತಾರೀಕಿನಿಂದ ಜನ್ಮದಲ್ಲಿ ರವಿ ಗ್ರಹ ಸಂಚಾರ ಇರುವುದರಿಂದ ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಉಲ್ಬಣ ಆಗಬಹುದು ಅಥವಾ ಈಗ ಕಾಣಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಕಣ್ಣಿನ ಸಮಸ್ಯೆ, ಮುಖದ ಮೇಲೆ ಕಲೆ ಆಗಬಹುದು, ಅಲರ್ಜಿ ಇತರ ಸಮಸ್ಯೆಗಳು ಕಾಡಬಹುದು.
- ಇನ್ನು ಈ ತಿಂಗಳ ಇಪ್ಪತ್ತೊಂದನೇ ತಾರೀಕಿಂದ ಜನ್ಮ ರಾಶಿಗೆ ಗುರು ಬರುವುದರಿಂದ ನಾನಾ ರೀತಿಯ ದುಃಖಗಳನ್ನು ಅನುಭವಿಸುತ್ತೀರಿ. ಆಫರ್ ಪ್ರೈಸ್ ಗಳು ಎಂಬ ಮಾಯಾ ಜಿಂಕೆ ಹಿಂದೆ ಬೀಳಬೇಡಿ. ಅದು ಭೂಮಿ, ಅಪಾರ್ಟ್ ಮೆಂಟ್, ಕಾರು ಯಾವುದೇ ಇರಬಹುದು. ಖರೀದಿ ಮಾಡುವ ವೇಳೆ ಜಾಗ್ರತೆ ಮಾಡಿ. ಜತೆಗೆ ನಿಮ್ಮ ಆರೋಗ್ಯದ ಬಗ್ಗೆ ಲಕ್ಷ್ಯ ಕೊಡಿ.
- ನಿಮ್ಮ ತನು ಭಾವದಲ್ಲೇ ಗುರು- ರಾಹು ಒಟ್ಟಾಗಿ ಗುರು ಚಂಡಾಲ ಯೋಗ ಸೃಷ್ಟಿ ಆಗಲಿದೆ. ಆರಂಭದ ಈ ಹಂತದಲ್ಲಿ ನಿಮಗಿಂತ ಬಲಿಷ್ಠರನ್ನು ಎದುರು ಹಾಕಿಕೊಳ್ಳಬೇಡಿ. ಅದೆಷ್ಟೇ ಸಣ್ಣ ಮೊತ್ತವಾದರೂ ಸರಿ, ಲೆಕ್ಕವನ್ನು ಸರಿಯಾಗಿ ಬರೆದಿಡಿ, ಹಣವನ್ನು ನಿರ್ವಹಿಸುವವರು ಸರಿಯಾಗಿ ವಾಪಸ್ ಕೊಡಿ.
- ಇನ್ನು ತಿಂಗಳ ಮೊದಲ ಹದಿಮೂರು ದಿನ ವ್ಯಯ ಸ್ಥಾನದಲ್ಲಿ ರವಿ ಇರುತ್ತಾನೆ. ಆದ್ದರಿಂದ ಸರ್ಕಾರಿ ವ್ಯವಹಾರಗಳಲ್ಲಿ ದಂಡ, ಜುಲ್ಮಾನೆ ಕಟ್ಟುವಂಥ ಪರಿಸ್ಥಿತಿ ಎದುರಾಗಬಹುದು. ಇನ್ನು ನೀವು ಯಾವುದಾದರೂ ಶಾರ್ಟ್ ಕಟ್ ಮಾರ್ಗವನ್ನು ಆಲೋಚಿಸಿ, ವಿಶ್ವಾಸಾರ್ಹತೆಗೆ ಧಕ್ಕೆ ಮಾಡಿಕೊಳ್ಳಲಿದ್ದೀರಿ.
- ಈ ತಿಂಗಳ ಇಪ್ಪತ್ತು ದಿನ ವ್ಯಯದ ಗುರು ಕೊನೆ ಹಂತದಲ್ಲಿ ಅನಗತ್ಯ ವಸ್ತುಗಳಿಗೆ ಖರ್ಚು ಮಾಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇಎಂಐನಲ್ಲಿ ಕಟ್ಟಿದರಾಯಿತು ಎಂದುಕೊಂಡು ನಿಮಗೆ ಬೇಡದಿದ್ದರೂ ವಸ್ತುಗಳನ್ನು ಖರೀದಿ ಮಾಡಿದರೋ ಆ ಮೇಲೆ ಬಹಳ ಪರಿತಪಿಸುತ್ತೀರಿ.
ಮೇಷ ಐದು ಶುಭ ವಿಚಾರಗಳು
- ಎರಡನೇ ಮನೆಯಲ್ಲಿ ಶುಕ್ರ ಸಂಚರಿಸುವುದರಿಂದ ಕುಟುಂಬದವರ ಬೆಂಬಲದಿಂದ ನಡೆಯುವ ವ್ಯವಹಾರ ಮಾಡುತ್ತಿರುವವರಿಗೆ ಆದಾಯ ಹೆಚ್ಚಳ ಆಗಲಿದೆ. ಇನ್ನು ನಿಮ್ಮ ಮಾತಿನಲ್ಲಿ ಆಕರ್ಷಣೆ ಹೆಚ್ಚಾಗಲಿದೆ. ಷೇರುಪೇಟೆ- ಚಿನ್ನದಲ್ಲಿ ಹೂಡಿಕೆ ಮಾಡಿದವರಿಗೆ ಲಾಭದ ಪ್ರಮಾಣ ಜಾಸ್ತಿ ಆಗುತ್ತದೆ.
- ನಿಮ್ಮ ಜನ್ಮ ರಾಶಿಯಲ್ಲಿ ಬುಧ ಸಂಚಾರ ಮಾಡುವುದರಿಂದ ಭೂಮಿ ಖರೀದಿಗೆ, ಸೈಟು ಖರೀದಿಗೆ ಮಾಡುವ ಪ್ರಯಾಣದಲ್ಲಿ ಉದ್ದೇಶ ಸಫಲ ಆಗಲಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ಹೊಸ ಪ್ರಾಜೆಕ್ಟ್ ಗಳಲ್ಲಿ ಹೆಚ್ಚು ಕಮಿಷನ್ ಪಡೆಯಲಿದ್ದೀರಿ.
- ಮೂರನೇ ಮನೆಯಲ್ಲಿ ಕುಜ ಸಂಚರಿಸುವಾಗ ಎಚ್.ಆರ್. (ಕೆಲಸಕ್ಕೆ ಜನರನ್ನು ನೇಮಿಸಿಕೊಳ್ಳುವ) ಏಜೆನ್ಸಿ ನಡೆಸುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ನಿಮ್ಮ ಸೋದರ- ಸೋದರಿ ಮೂಲಕ ಹೊಸ ಕ್ಲೈಂಟ್ ಗಳು ಸಿಗಲಿದ್ದಾರೆ.
- ಹನ್ನೊಂದನೇ ಮನೆಯಲ್ಲಿ ಶನಿ ಸಂಚರಿಸುವುದರಿಂದ ಈ ಅವಧಿಯಲ್ಲಿ ಹೂಡಿಕೆಯನ್ನು ಹೆಚ್ಚು ಮಾಡಲಿದ್ದೀರಿ. ನಿಮ್ಮ ವ್ಯವಹಾರಗಳನ್ನು ವಿಸ್ತರಿಸಿಕೊಂಡು, ಹೊಸ ಪ್ರಭಾವಿ ವ್ಯಕ್ತಿಗಳ ಪರಿಚಯ ಆಗಲಿದೆ.
- ಈ ತಿಂಗಳ ಮೊದಲ ಆರು ದಿನ ಜನ್ಮ ರಾಶಿಯಲ್ಲಿ ಶುಕ್ರ ಸಂಚರಿಸುವಾಗ ಪ್ರೇಮಿಗಳಿಗೆ, ನವ ದಂಪತಿಗಳಿಗೆ ಉತ್ತಮವಾದ ಸಮಯ. ಖುಷಿಖುಷಿಯಾಗಿ ಇರಲಿದ್ದೀರಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ